ಕೃಷ್ಣರಾಜ ಒಡೆಯರ್ 2

ಹಿಂದಿನ ಮೈಸೂರರಸರಲ್ಲೊಬ್ಬರು. 1ನೆಯ ಕೃಷ್ಣರಾಜ ಒಡೆಯರ ಎರಡನೆಯ ದತ್ತುಪುತ್ರ ; ಒಡೆಯ ಮನೆತನದ 18ನೆಯ ದೊರೆ. ಆಳ್ವಿಕೆಯ ಕಾಲ 1734-1766. ಅಣ್ಣ 7ನೆಯ ಚಾಮರಾಜ ಒಡೆಯರ ಮರಣಾನಂತರ ಸಿಂಹಾಸನಕ್ಕೆ ಬಂದರು. ದಳವಾಯಿ ದೇವರಾಜಯ್ಯನೂ ಸರ್ವಾಧಿಕಾರಿ ಮತ್ತು ಪ್ರಧಾನ ನಂಜರಾಜಯ್ಯನೂ ಚಾಮರಾಜ ಒಡೆಯರ ಕಾಲದಲ್ಲಿ ಪ್ರಬಲರಾಗಿ, ಚಾಮರಾಜ ಒಡೆಯರನ್ನು ಕಬ್ಬಾಳದುರ್ಗದಲ್ಲಿ ಸೆರೆಯಲ್ಲಿಟ್ಟು ತಾವೇ ಆಡಳಿತ ನಡೆಸುತ್ತಿದ್ದರು. ಚಾಮರಾಜರು ಅಲ್ಲೇ ತೀರಿಕೊಂಡರು. ಅವರ ಸ್ವಂತ ಸಹೋದರನಾದ ವೆಂಕಟೇ ಅರಸು ಸ್ವತಂತ್ರ ಮನೋವೃತ್ತಿಯವನಾಗಿದ್ದುದರಿಂದ 1ನೆಯ ಕೃಷ್ಣರಾಜರ ಇನ್ನೊಬ್ಬ ದತ್ತು ಪುತ್ರರಾದ ಇಮ್ಮಡಿ ಕೃಷ್ಣರಾಜ ಒಡೆಯರಿಗೆ ಆ ದಳವಾಯಿಗಳು ಪಟ್ಟಕಟ್ಟಿದರು. ಇವರ ಕಾಲದಲ್ಲಿ ಸಂಸ್ಥಾನದ ಆಡಳಿತದಲ್ಲಿ ವಿಶೇಷ ಬದಲಾವಣೆಯೇನೂ ಆಗಲಿಲ್ಲ. ನಂಜರಾಜ ತನ್ನ ಹೆಸರಿನಲ್ಲಿ ಕನ್ನಂಬಾಡಿಯ ಬಳಿ ನಂಜರಾಜಸಮುದ್ರವೆಂಬ ಒಂದು ಅಗ್ರಹಾರವನ್ನು 1741ರಲ್ಲಿ ಕಟ್ಟಿಸಿದನಲ್ಲದೆ ಹಲವಾರು ದೇವಾಲಯಗಳಿಗೆ ದಾನಗಳನ್ನು ಕೊಟ್ಟ. ಇದೇ ಸಮಯದಲ್ಲಿ ತಾನು ಅನ್ಯಾಯದಿಂದಗಳಿಸಿದ ಐಶ್ವರ್ಯವನ್ನು ಪಶ್ಚಾತ್ತಾಪದಿಂದ ರಾಜಮನೆತನಕ್ಕೆ ಹಿಂತಿರುಗಿಸಿದನಲ್ಲದೆ ತನ್ನ ಅನಂತರ ದೇವರಾಜನ ತಮ್ಮ ಕರಾಚುರಿ ನಂಜರಾಜನಿಗೆ ದಳವಾಯಿಪಟ್ಟ ಕೊಡಬಾರದೆಂದು ಎಚ್ಚರಿಕೆ ನೀಡಿದ್ದ.

	ಮೈಸೂರಿನಿಂದ ಸಿರಾದ ನವಾಬ ಪಡೆಯುತ್ತಿದ್ದ ಕಪ್ಪವನ್ನು ತಾನು ಕಬಳಿಸಬೇಕೆಂದು ಆರ್ಕಾಟಿನ ನವಾಬನಾದ ದೋಸ್ತ್ ಆಲಿಖಾನ್ ಶ್ರೀರಂಗಪಟ್ಟಣವನ್ನು ಮುತ್ತಿದಾಗ ಮುಪ್ಪಿನ ದಳಪತಿ ದೇವರಾಜಯ್ಯ ಅವನನ್ನು ಹೊಡೆದಟ್ಟಿದ. ಈ ವೇಳೆಗೆ ದಳವಾಯಿಯಾಗಿದ್ದ ಕರಾಚುರಿ ನಂಜರಾಜ ಧಾರಾಪುರದ ಪಾಳೆಯಗಾರರ ಮೇಲೆ ದಂಡೆತ್ತಿ ಹೋಗಿದ್ದಾಗ ದಖನಿನ ಸುಬೇದಾರ ನಿಜಾಂ-ಉಲ್-ಮುಲ್ಕನ ಮಗ ನಾಸಿರ್‍ಜಂಗ್ ಶ್ರೀರಂಗಪಟ್ಟಣವನ್ನು ಮುತ್ತಲು, ಆಡಳಿತಾಧಿಕಾರಿಯಾಗಿದ್ದ ದೇವರಾಜಯ್ಯನ ನೇತೃತ್ವದಲ್ಲಿ ಕೃಷ್ಣರಾಜ ಒಡೆಯರು ಕಳುಹಿಸಿದ ನಿಯೋಗ ಸಂಧಾವನ್ನಾರಂಭಿಸಿತು. ಧಾರಾಪುರದಿಂದ ಜಯಶೀಲನಾಗಿ ಹಿಂತಿರುಗಿದ ನಂಜರಾಜನ ಮಗಳನ್ನು ಒಡೆಯರು ವಿವಾಹವಾದುದರಿಂದ ನಂಜರಾಜನ ಸ್ಥಾನ ಭದ್ರವಾಯಿತು.

	1749ರಲ್ಲಿ ನಡೆದ ದೇವನಹಳ್ಳಿಯ ಪಾಳೆಯಗಾರರ ಮೇಲಿನ ದಾಳಿಯಲ್ಲಿ ನಂಜರಾಜನಿಗೆ ಸಹಾಯಕನಾಗಿ ಸೈನ್ಯ ಸೇರಿದ ಹೈದರ್ ಆಲಿ ಅಮಿತಶೌರ್ಯ ಸಾಹಸಗಳನ್ನು ಮೆರೆದು ಹೆಸರು ಗಳಿಸಿದ. 50 ಅಶ್ವಗಳ ಮತ್ತು 200 ಪದಾತಿಗಳ ಪಡೆಯ ನಾಯಕನಾದ.

	ಈ ಮಧ್ಯೆ ದಖನಿನ ಸುಬೇದಾರ ಪದವಿಗೆ ನಡೆದ ಹೋರಾಟದಲ್ಲಿ ನಾಸಿರ್‍ಜಂಗನ ಪರ ಮೈಸೂರು ಸೈನ್ಯ ಹೊರಡಲು ಹೈದರ್ ಅದರಲ್ಲಿ ಸೇರಿಸಿದ್ದ. ಹೋರಾಟದಲ್ಲಿ ನಾಸಿರ್‍ಜಂಗ್ ಸತ್ತ. ಹೈದರ್ ಅಮಿತ ಐಶ್ವರ್ಯವನ್ನು ವಶಪಡಿಸಿಕೊಂಡು ದೇವನಹಳ್ಳಿಯಲ್ಲಿ ಅದನ್ನು ಬಚ್ಚಿಟ್ಟ.

	ಕರ್ಣಾಟಕದ ನವಾಬ ಪದವಿಗೆ ನಡೆದ ಹೋರಾಟದಲ್ಲಿ ನಂಜರಾಜನ ಸೈನ್ಯ ಮಹಮ್ಮದಾಲಿಯ ನೆರವಿಗೆ ಹೋಯಿತು. ಗುಪ್ತ ಒಡಂಬಡಿಕೆಯ ಪ್ರಕಾರ ತಿರುಚ್ಚಿರಪಳ್ಳಿಯಿಂದ ಕನ್ಯಾಕುಮಾರಿಯವರೆಗಿನ ಪ್ರಾಂತ್ಯಗಳನ್ನು ಮೈಸೂರಿಗೆ ನೀಡುವುದಾಗಿ ಮಹಮ್ಮದಾಲಿ ಆಶೆ ತೋರಿಸಿದ್ದ. ಜಯಶೀಲನಾದ ಮೇಲೆ ಅವನು ಶ್ರೀರಂಗಂ ಮತ್ತು ನೆರೆಹೊರೆಯ ಪ್ರದೇಶಗಳ ಆದಾಯವನ್ನು ಮಾತ್ರ ಕೊಡಲೊಪ್ಪಿದ. ಹೀಗೆ ನಂಜರಾಜನಿಗೆ ನಿರಾಶೆಯಾಯಿತು. ಇದರಿಂದ ಮತ್ತು ನಂಜರಾಜನ ಇತರ ಕಾರ್ಯಗಳಿಂದ ರಾಜ್ಯದ ಬೊಕ್ಕಸ ಬರಿದಾಗಿತ್ತು. ಈ ಸಂದರ್ಭದಲ್ಲಿ ದಖನಿನ ಸುಬೇದಾರ ಸಲಾಬತಜಂಗ್ ಫ್ರೆಂಚರ ಸಹಾಯದಿಂದ ಮೈಸೂರನ್ನು ಮುತ್ತಿ ಕಪ್ಪಕಾಣಿಕೆಗಳನ್ನು ಕೊಡುವಂತೆ ಬಲಾತ್ಕರಿಸಿದ. ದೇವರಾಜ ವಿಧಿಯಿಲ್ಲದೆ 56 ಲಕ್ಷ ರೂ. ಕೊಡಲೊಪ್ಪಿದರೂ ಅಷ್ಟು ಹಣವನ್ನು ಒಟ್ಟುಗೂಡಿಸಲು ಆಗಲಿಲ್ಲ. ದೇಶದಲ್ಲಿ ಅನಾಯಕ ಪರಿಸ್ಥಿತಿ ತಲೆದೋರಿತು. ಈವರೆಗೂ ಪ್ರೇಕ್ಷಕರಂತಿದ್ದ ಕೃಷ್ಣರಾಜರು ತಮ್ಮ ಅಧಿಕಾರವನ್ನು ಮರಳಿ ಪಡೆದು ರಾಜ್ಯದ ಪರಿಸ್ಥಿತಿಯನ್ನು ತಹಬಂದಿಗೆ ತರಲು ನಿರ್ಧರಿಸಿದರು. ದಳವಾಯಿಗಳನ್ನು ಮೂಲೆಗೊತ್ತರಿಸುವ ನಿರ್ಧಾರ ಮಾಡಿದ್ದುದನ್ನು ತಿಳಿದ ನಂಜರಾಜ ಅವರನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಅವರ ಪಕ್ಷದವರ ಕಿವಿಮೂಗುಗಳನ್ನು ಅವರ ಸಮ್ಮುಖದಲ್ಲೇ ಕತ್ತರಿಸಿ ಹಾಕಿದ. ಅಸಹಾಯಕರಾದ ಅರಸರ ಅವಮಾನವನ್ನು ಸಹಿಸದ ದೇವರಾಜಯ್ಯ ತಮ್ಮನ ಮೇಲೆ ಮುನಿದುಕೊಂಡು ಸತ್ಯಮಂಗಲಕ್ಕೆ ಹೊರಟುಹೋದ. ಈ ಮಧ್ಯೆ ಜೊತೆಗೆ ಹಣದ ತೊಂದರೆ ಹೆಚ್ಚಾಯಿತು. ಅಲ್ಲದೆ 1757ರಲ್ಲಿ ಮರಾಠರು ಬ್ರಿಟಿಷರ ಸಹಾಯದಿಂದ ದಾಳಿ ನಡೆಸಿ 32 ಲಕ್ಷ ರೂ.ಗಳನ್ನು ಕಾಣಿಕೆಯಾಗಿ ಕೇಳಿದರು. ಈ ಹಣ ಕೊಡಲಾರದ ನಂಜರಾಜ ರಾಜ್ಯದ ಕೆಲವು ಭಾಗಗಳನ್ನು ಅವರಿಗೆ ವಹಿಸಿಕೊಟ್ಟ. ಸೈನ್ಯಕ್ಕೆ ಸಂಬಳ ಸಂದಾಯವಾಗಿರಲಿಲ್ಲವಾಗಿ ಅದು ದಂಗೆಯೆದ್ದಿತು. ನಂಜರಾಜ ಅರಸರಲ್ಲಿ ತನ್ನ ತಪ್ಪೊಪ್ಪಿಕೊಂಡ. ದೇವರಾಜ ಹಿಂದಿರುಗಿದ. ಆದರೆ ಆರು ದಿನಗಳಲ್ಲಿ ಮೃತನಾದ. ಹೈದರ್ ಆಲಿ ಪರಿಸ್ಥಿತಿಯನ್ನು ಸುಧಾರಿಸುವ ಹೊಣೆ ಹೊತ್ತು ಸೈನಿಕರಿಗೆ ತನ್ನ ಬೊಕ್ಕಸದಿಂದ ಹಣ ಕೊಟ್ಟು, ಅಧಿಕಾರವನ್ನು ತಾನೇ ವಹಿಸಿಕೊಂಡ. ಮರಾಠರಿಗೆ ವಹಿಸಿದ್ದ ಪ್ರದೇಶಗಳನ್ನು ಹೈದರ್ ಆಲಿ ಪುನ: ವಶಪಡಿಸಿಕೊಂಡದ್ದರಿಂದ ಅವರು ದಂಡೆತ್ತಿ ಬಂದರು (1759). ಹೈದರ್ ಆಲಿ ಅವರನ್ನು ಸೋಲಿಸಿ, ಸಂಧಿ ಮಾಡಿಕೊಂಡ. ಅದರ ಪ್ರಕಾರ 32 ಲಕ್ಷ ಹಣ ಕೊಡಬೇಕಾಯಿತು. 16 ಲಕ್ಷ ಹಣ ಕೊಟ್ಟು ಉಳಿದುದನ್ನು ಕೊಡುವ ಜವಾಬ್ದಾರಿಯನ್ನು ಹೈದರನೇ ವಹಿಸಿಕೊಂಡ. ಹೈದರನ ಈ ಸಾಹಸಗಳಿಂದ ಸುಪ್ರೀತರಾದ ಕೃಷ್ಣರಾಜರು ಶ್ರೀರಂಗಪಟ್ಟಣದ ಆಸ್ಥಾನದಲ್ಲಿ ವೈಭವಪೂರ್ಣ ದರ್ಬಾರಿನಲ್ಲಿ ಹೈದರನಿಗೆ ಗೌರವ ನೀಡಿ ಫತ್ತೆ ಹೈದರ್ ಬಹಾದ್ದೂರ್ ಎಂಬ ಬಿರುದು ನೀಡಿದರು (1759). ಕೃಷ್ಣರಾಜ ಒಡೆಯರು ಹೈದರನ ವಿಷಯದಲ್ಲಿ ಹೆಚ್ಚುಹೆಚ್ಚು ಆದರ ತೋರಿ ಕ್ರಮೇಣ ಆಸ್ಥಾನದಲ್ಲಿ, ಆಡಳಿತದಲ್ಲಿ ಅವನ ಪ್ರಾಬಲ್ಯ ಹೆಚ್ಚುವಂತೆ ಮಾಡಿ, ನಂಜರಾಜನ್ನು ಅಧಿಕಾರದಿಂದ ತೆಗೆದು ಹಾಕಿದರು. ಕೊಣನೂರಿನಲ್ಲಿ ನೆಲಸಿದ ನಂಜರಾಜನಿಗೆ ಒಂದು ಲಕ್ಷ ರೂ.ಗಳ ವರಮಾನದ ಜಹಗೀರಿಯನ್ನು ಕೊಡಲಾಯಿತು. ನಂಜರಾಜನ ಮಗಳಾದ ಮಹಾರಾಣಿ ಈ ಮಧ್ಯೆ ತೀರಿಕೊಂಡಳು. ಒಡೆಯರು ಮತ್ತೆ ಇಬ್ಬರನ್ನು ವಿವಾಹವಾದರು. ಈ ಇಬ್ಬರಲ್ಲಿ ಒಬ್ಬರು ಮೈಸೂರಿನ ಇತಿಹಾಸದಲ್ಲಿ ಪ್ರಸಿದ್ಧರಾದ ಲಕ್ಷಮ್ಮಣ್ಣಿ. ಕ್ರಮೇಣ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಹೈದರ್ ಆಲಿ ಫ್ರೆಂಚರ ಜೊತೆಗೂಡಿ ಬ್ರಿಟಿಷರ ವಿರುದ್ಧ ಯುದ್ಧಕ್ಕಿಳಿದ. ಈ ಮಧ್ಯೆ ಹೈದರನ ವಿರುದ್ಧ ರಾಜಧಾನಿಯಲ್ಲಿ ಪಿತೂರಿ ನಡೆಯಿತು. ಅವನು ಎಚ್ಚರಿಕೆ ವಹಿಸಿ ತಲೆತಪ್ಪಿಸಿಕೊಂಡು ಆನೆಕಲ್ಲಿನಲ್ಲಿದ್ದ ತನ್ನ ಭಾವಮೈದುನ ಇಸ್ಮಾಯಿಲ್ ಆಲಿಯ ಆಶ್ರಯದಲ್ಲಿ ನಿಂತ. ಮೊದಲು ಹೈದರ್ ಆಲಿಯ ನಂಬಿಕೆಯ ಸಹಚರನಾಗಿದ್ದು ಆಮೇಲೆ ಒಡೆಯರ ಪರವಾಗಿ ಪಿತೂರಿಯ ಮುಖ್ಯನಾಗಿದ್ದ ಖಂಡೇರಾಯನನ್ನು ಸೋಲಿಸಿ, ಕೃಷ್ಣರಾಜ ಒಡೆಯರು ತನಗೆ ಸರ್ವಾಧಿಕಾರವನ್ನು ವಹಿಸುವಂತೆ ಮಾಡಿಕೊಂಡ. ಒಡೆಯರಿಗೆ 3 ಲಕ್ಷ ಮತ್ತು ಈ ಹೋರಾಟದಲ್ಲಿ ತನಗೆ ನೆರವು ನೀಡಿದ ಕರಾಚುರಿ ನಂಜರಾಜನಿಗೆ 1 ಲಕ್ಷ ಪಗೋಡಗಳ ವರ್ಷಾಶನ ನೀಡಿ ಖಂಡೇರಾಯನನ್ನು ಕೊಂದು ಹಾಕಿದ. 1761ರ ಅನಂತರ ಹೈದರ್ ಆಲಿಯ ಸರ್ವಾಧಿಕಾರದಲ್ಲಿ ಹೆಸರಿಗೆ ಮಾತ್ರ ಅರಸರಾಗಿ ಮುಂದುವರಿದ ಇಮ್ಮಡಿ ಕೃಷ್ಣರಾಜರು 1766ರಲ್ಲಿ ಮೃತರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ